ಕಾಲೇಜಿನ ಸ್ಥಾಪಕರು
ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಗಳಿಸಿದ ಶಿಕ್ಷಣ ಪ್ರವರ್ತಕ, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ನ್ನ ಸ್ಥಾಪಕ, ಅತ್ಯುತ್ತಮ ಬ್ಯಾಂಕರ್, ಮಣಿಪಾಲದ ಶಿಲ್ಫಿ ದಿ. ಡಾ. ಟಿ.ಎಂ.ಎ. ಪೈ ಹಾಗೂ ಮುಂಬೈಯಲ್ಲಿ ಕೈಗಾರಿಕೋಧ್ಯಮಿಯಾಗಿದ್ದ ಮೂಡುಬಿದಿರೆಯ ಮಣ್ಣಿನ ಮಗ ದಿ. ಎಸ್.ಎನ್. ಮೂಡುಬಿದಿರೆಯವರ ಅವಿರತ ಶ್ರಮದ ಫಲವಾಗಿ ಜುಲೈ 09, 1965 ರಲ್ಲಿ ಕಾಲೇಜು ಪ್ರಾರಂಭಗೊಳ್ಳುವುದರ ಜೊತೆಗೆ ಗ್ರಾಮೀಣ ಭಾಗದ ಇಲ್ಲಿಯ ಯುವಜನತೆಯ ಉನ್ನತ ಶಿಕ್ಷಣದ ಕನಸು ಸಾಕಾರಗೊಂಡಿತು. ಕಾಲೇಜಿನ ಪ್ರಾರಂಭಿಕ ವರ್ಷದಲ್ಲಿ, ಮೂಡುಬಿದಿರೆ ನಗರದ ಹೃದಯ ಭಾಗದಲ್ಲಿರುವ ಸಮಾಜ ಮಂದಿರ ಸಭಾದ ಕಟ್ಟಡದಲ್ಲಿ ತರಗತಿಗಳು ಪ್ರಾರಂಭಗೊಂಡು, ಮರು ವರ್ಷದಿಂದ ಮೂಡುಬಿದಿರೆಯ ಅತ್ಯಂತ ರಮಣೀಯವಾದ ಕೊಡಂಗಲ್ಲು ಪರಿಸರದ 23 ಎಕರೆ ಭೂಮಿಯಲ್ಲಿ ಕಟ್ಟಲ್ಪಟ್ಟ, ತನ್ನದೇ ಆದ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಯಿತು. ಕಾಲೇಜು ಸ್ಥಾಪನೆಯಲ್ಲಿ ಇವರಿಬ್ಬರು ದಾರ್ಶನಿಕರಲ್ಲದೆ, ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಹಲವಾರು ಕೊಡುಗೈ ದಾನಿಗಳೂ ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ.

ಈ ಭಾಗದ ಪ್ರತಿಭಾವಂತ ಯುವ ಜನತೆಗೆ ಗಗನ ಕುಸುಮವಾಗಿದ್ದ ಉನ್ನತ ಶಿಕ್ಷಣವು, ಕಾಲೇಜು ಸ್ಥಾಪನೆಗೊಂಡುದರಿಂದಾಗಿ ಬಹಳಷ್ಟು ಪ್ರಯೋಜನ ದೊರಕುವಂತಾಯಿತು. ಸಾವಿರಾರು ನಾಗರೀಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿರುವ ಈ ಸಂಸ್ಥೆಯು, ನ್ಯಾಯವಾದಿಗಳು, ಕೈಗಾರಿಕೋದ್ಯಮಿಗಳೇ ಮೊದಲಾದ ಹಲವಾರು ಮುಖಂಡರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುತ್ತದೆ.

ಸ್ಥಾಪಕರ ಮಹೋನ್ನತ ಆಶಯದಂತೆ ಕಾಲೇಜನ್ನು ಲಾಭದಾಯದ ವಾಣಿಜ್ಯೀಕರಣ ಸಂಸ್ಥೆಯನ್ನಾಗಿಸದೇ, ಇಲ್ಲಿ ಶಿಕ್ಷಣವನ್ನು ಸಮಾಜ ಸೇವೆಗಾಗಿ ಮುಡಿಪಾಗಿರಿಸಲಾಗಿದೆ. ಹಣವಿಲ್ಲವೆನ್ನುವ ಕಾರಣಕ್ಕಾಗಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಮಹದಾಸೆಯೊಂದಿಗೆ ನಡೆಯುತ್ತಿರುವ ಈ ಸಂಸ್ಥೆಯು, ಯಾವುದೇ ಪ್ರತಿಪಲಾಪೇಕ್ಷೆಗಳನ್ನು ಬಯಸದೆ ಮುನ್ನಡೆಯುತ್ತಿದೆ. ಸಂವಿಧಾನದ ಆಶಯದಂತೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ತೆರೆದುಕೊಂಡಿರುವ ಈ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ದಾಪುಗಾಲನ್ನಿಡುವುದರೊಂದಿಗೆ ಈಗಾಗಲೇ ಸುವರ್ಣ ಸಂಭ್ರಮವನ್ನೂ ಕಂಡಿದೆ.
ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿಯು (ನ್ಯಾಕ್) ಕಾಲೇಜಿಗೆ ಭೇಟಿ ನೀಡಿದ್ದು, ಇಲ್ಲಿಯ ವಿವಿಧ ವಿಭಾಗಗಳು, ಮೂಲ ಸೌಕರ್ಯಗಳು, ಅಳವಡಿಸಿಕೊಂಡಿರುವ ಪಠ್ಯಕ್ರಮ, ಬೋಧನಾ ವಿಧಾನ, ಸಂಶೋಧನೆ, ವಿಸ್ತರಣಾ ಕಾರ್ಯ, ಕಲಿಕಾ ಸೌಲಭ್ಯಗಳು, ಪಠ್ಯೇತರ ಚಟುವಟಿಕೆಗಳು ಮತ್ತು ಆಡಳಿತ ವ್ಯವಸ್ಥೆಗಳ ಕುರಿತಾಗಿ ಸಮಗ್ರ ಪರಿಶಿಲನೆ ನಡೆಸಿ, 2015-16ನೇ ಸಾಲಿನಲ್ಲಿ ನಡೆದ 3ನೇ ಆವರ್ತದ ಮೌಲ್ಯಾಂಕನದಲ್ಲಿಯೂ 'ಎ' ಶ್ರೇಣಿ ಮಾನ್ಯತೆಯನ್ನು ನೀಡಿರುತ್ತದೆ.


ಶ್ರೀ ಮಹಾವೀರ ಕಾಲೇಜು ಟ್ರಸ್ಟ್ ಹಲವು ಸಹ ಸಂಸ್ಥೆಗಳನ್ನು ನಡೆಸುತ್ತಿದೆ. ಕರ್ನಾಟಕದ ಸರಕಾರದ ನಿರ್ದೇಶನದಂತೆ 2001 ರಲ್ಲಿ ಪದವಿ ಕಾಲೇಜಿನಿಂದ, ಪದವಿ ಪೂರ್ವ ತರಗತಿಗಳು ಬೇರ್ಪಡೆಗೊಂಡು ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು ಸ್ಥಾಪನೆಗೊಂಡಿತು. ಎಸ್.ಎನ್.ಮೂಡುಬಿದ್ರಿ ಪಾಲಿಟೆಕ್ನಿಕ್, ಎ ಜಿ ಸೋನ್ಸ್ ಐ.ಟಿ.ಐ. ಮತ್ತು ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜುಗಳು ಟ್ರಸ್ಟ್ನ ಅಧೀನಕ್ಕೊಳಪಟ್ಟ ಇನ್ನಿತರ ಸಂಸ್ಥೆಗಳಾಗಿವೆ.


1965ರಲ್ಲಿ ಪ್ರಾರಂಭಗೊಂಡ ಶ್ರೀ ಮಹಾವೀರ ಕಾಲೇಜು ಮೊದಲಿಗೆ ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಅನುದಾನಿತ ಸಂಸ್ಥೆಯಾಗಿತ್ತು. ತದನಂತರ, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿತು. ಇದು, ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ 1956ರ ಯು.ಜಿ.ಸಿ. ಆಕ್ಟ್ 2 (f) ನ ಅಭಿವೃದ್ಧಿ ಅನುದಾನ ಪಡೆಯಲು ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ. ಈಗಾಗಲೇ, 54 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಈ ಸಂಸ್ಥೆಯು, ಮುಂದಿನ ದಿನಗಳಲ್ಲೂ ಸಮಾಜಕ್ಕೆ ಉತ್ತಮ ಕೊಡುಗೆಯ ಭರವಸೆಯನ್ನು ಮೂಡಿಸಬಲ್ಲ ಸಂಸ್ಥೆಯೆನಿಸಿದೆ.